ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಯಕ್ಷಗಾನ
Share
ಯಕ್ಷಗಾನದ ಪಾಯಗಳು ಮತ್ತು ತಿಟ್ಟುಗಳು

ಲೇಖಕರು :
ಪ್ರಭಾಕರ ಶಿಶಿಲ
ಭಾನುವಾರ, ಡಿಸೆ೦ಬರ್ 13 , 2015

ಪಾಯ ಅಂದರೆ ಪ್ರಾಂತೀಯ ಪ್ರಭೇದ. ಯಕ್ಷಗಾನದ ಪ್ರಾಂತೀಯ ಪ್ರಭೇದಗಳನ್ನು ಹೀಗೆ ಗುರುತಿಸಬಹುದು :

ಮೂಡಲ ಪಾಯ ಪ್ರಭೇದ

ಮೂಡಲ ಪಾಯವು ಕರ್ನಾಟಕದ ಮೂಡಲ ಪ್ರಸ್ಥಭೂಮಿಯಿಂದ ಮೈಸೂರು ಸೀಮೆ ಮತ್ತು ಉತ್ತರ ಕರ್ನಾಟಕದಲ್ಲಿ ಪ್ರಚಲಿತದಲ್ಲಿರುವ ಯಕ್ಷಗಾನ ಪ್ರಕಾರವಾಗಿದೆ. ಮೂಡಲ ಪಾಯದಲ್ಲಿ ದೊಡ್ಡಾಟ, ಸಣ್ಣಾಟ ಮತ್ತು ಪಾರಿಜಾತ ಎಂಬ ಮೂರು ಪ್ರಭೇದ ಗಳನ್ನು ಗುರುತಿಸಲಾಗಿದೆ.

1. ದೊಡ್ಡಾಟ :

ದೊಡ್ಡಾಟ
ದೊಡ್ಡಾಟವು ದೊಡ್ಡ ರಂಗಸ್ಥಳ, ದೊಡ್ಡ ಕಿರೀಟ, ವೈಭವಯುತ ವೇಷಭೂಷಣಗಳಿರುವ ಮತ್ತು ಅನೇಕ ಪಾತ್ರಧಾರಿಗಳನ್ನೊಳಗೊಂಡ ಯಕ್ಷಗಾನ ಪ್ರಕಾರ ವಾಗಿದೆ. ಒಂದು ಅಟ್ಟಕಟ್ಟಿ ಇದನ್ನು ಪ್ರದರ್ಶಿಸುವ ಸಂಪ್ರದಾಯವಿರುವುದರಿಂದ ಇದನ್ನು ಅಟ್ಟದಾಟ ಎನ್ನಲಾಗುತ್ತದೆ. ದೊಡ್ಡಾಟಕ್ಕೆ ಭಾಗವತರ ಆಟ, ದಶಾವತಾರ ಆಟ, ಬಯಲು ಕಥೆ ಎಂಬಿತ್ಯಾದಿ ಹೆಸರುಗಳಿವೆ.

ಭಾಗವತ ಪ್ರಾಧಾನ್ಯವಾದುದರಿಂದ ಅಥವಾ ಭಾಗವತ ದಿಂದ ಬಹುತೇಕ ಕತೆಗಳನ್ನು ಎತ್ತಿಕೊಂಡಿರುವುದರಿಂದ ಭಾಗವತರಾಟ ಎಂಬ ಹೆಸರು ಬಂದಿರಬೇಕು. ವಿಷ್ಣುಪ್ರಧಾನ ಕತೆಗಳಿಗೆ ಮಹತ್ವ ಸಿಕ್ಕಿದ ಮೇಲೆ ದಶಾವತಾರವೆಂಬ ಹೆಸರು ಬಂದಿರಬಹುದು. ಬಯಲು ಸೀಮೆಯಲ್ಲಿ ಜನಪ್ರಿಯವಾಗಿರುವುದರಿಂದ ಅಥವಾ ಬಯಲಲ್ಲಿ ಪ್ರದರ್ಶನಗೊಳ್ಳುತ್ತಿದ್ದುದರಿಂದ ಇದು ಬಯಲು ಕಥೆಯಾಗಿರಬೇಕು. ದೊಡ್ಡಾಟ ಪ್ರಕಾರದ ಹಾಡು, ಕುಣಿತ ಮತ್ತು ಸಂಭಾಷಣೆ ವಿಕಾಸ ಹೊಂದದೆ, ಶುದ್ಧ ಜಾನಪದೀಯವಾಗಿಯೇ ಉಳಿದಿದೆ.

ದೊಡ್ಡಾಟದ ಲಕ್ಷಣಗಳು

ದೊಡ್ಡಾಟದ ವೇಷಭೂಷಣ ಮತ್ತು ಕುಣಿತ ಜಾನಪದೀಯವಾಗಿದೆ. ಅವು ವಿಕಾಸ ಹೊಂದಿಲ್ಲ. ದೊಡ್ಡಾಟದ ಸಂಭಾಷಣೆ ಪೂರ್ವ ನಿಗದಿತವಾಗಿದ್ದು, ನಾಟಕದ ಸಂಭಾಷಣೆ ಯಂತೆ ಅದನ್ನು ಬಾಯಿಪಾಠ ಒಪ್ಪಿಸಬೇಕಾಗುತ್ತದೆ. ಸಂಸ್ಕೃತ ಭೂಯಿಷ್ಠವಾದ ಸಂಭಾಷಣೆಯು ಪ್ರಾಸಬದ್ಧವೂ, ಆಡಂಬರದ್ದೂ ಆಗಿರುತ್ತದೆ. ಶ್ರುತಿ, ತಾಳ, ಮದ್ದಳೆ ಮತ್ತು ಮುಖವೀಣೆಗಳು ಹಿಮ್ಮೇಳದ ವಾದ್ಯಗಳಾಗಿವೆ. ಚೆಂಡೆ ಬಳಕೆಯಲ್ಲಿಲ್ಲ.

‘ದೊಡ್ಡಾಟವು ಬಹು ಪ್ರಾಚೀನವಾದುದು ಮತ್ತು ಪಾರಿ ಪಾರ್ಶ್ವಕ, ವಿಟ ವಿದೂಷಕ ಇತ್ಯಾದಿ ಸಂಸ್ಕೃತ ಹೆಸರುಗಳು ಈ ಆಟದ ಸಾರಥಿ, ಕೋಡಂಗಿಗಳನ್ನು ನೋಡಿ ಹುಟ್ಟಿರ ಬಹುದು’ ಎಂದು ಅಮೃತ ಸೋಮೇಶ್ವರರು ಉಲ್ಲೇಖಿಸಿದ್ದಾರೆ [ಯಕ್ಷಾಂದೊಳ, 32]

2. ಸಣ್ಣಾಟ :

ಸಣ್ಣಾಟ
ವಿಸ್ತಾರ, ವೈಭವದಲ್ಲಿ ದೊಡ್ಡಾಟಕ್ಕಿಂತ ಕಿರಿದಾದ, ವೇಷಗಳಲ್ಲಿ ಬೆಡಗು ಮತ್ತು ಬೆರಗುಗಳಿಲ್ಲದ ನಾಟಕ ಮತ್ತು ಬಯಲಾಟಗಳ ನಡುವಿನ ಸ್ಥತಿಯಂತಿರುವ ಮೂಡಲಪಾಯದ ಒಂದು ಪ್ರಕಾರವೇ ಸಣ್ಣಾಟ. ಉತ್ತರ ಕರ್ನಾಟಕದ ಕೃಷ್ಣಾ ನದಿ ತೀರ ಇದರ ಉಗಮಸ್ಥಾನವೆಂದು ಚಂದ್ರಶೇಖರ ಕಂಬಾರರು ಗುರುತಿಸುತ್ತಾರೆ.

ಸಣ್ಣಾಟದ ಲಕ್ಷಣಗಳು

ಸಣ್ಣಾಟದ ಭಾಗವತನ್ನು ದೂತೆ, ತಾತ್ಯ, ಮೇಟಿತಾಳ ಎಂಬಿತ್ಯಾದಿ ಹೆಸರು ಗಳಿಂದ ಕರೆಯಲಾಗುತ್ತದೆ. ಹಾಡುಗಳು ಬಹುತೇಕವಾಗಿ ಲಾವಣಿ ಅಥವಾ ಕವಾಲಿ ಧಾಟಿಯವು ಆಗಿರುತ್ತವೆ. ಭಾಗವತನೊಡನೆ ಸಹ ಹಾಡುಗಾರರು ಮತ್ತು ಪಾತ್ರಧಾರಿಗಳು ಧ್ವನಿ ಗೂಡಿಸುತ್ತಾರೆ. ಪೂರ್ವರಂಗದಲ್ಲಿ ದೇವರ ಸ್ತುತಿಗಳಿದ್ದರೂ, ಆ ದೇವರುಗಳು ಪಾತ್ರಗಳಾಗಿ ರಂಗದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಸ್ತ್ರೀಯರೇ ಸ್ತ್ರೀಪಾತ್ರ ವಹಿಸುವುದು ಹೆಚ್ಚಾಗಿ ಚಾಲ್ತಿಯಲ್ಲಿದೆ.

ಪೌರಾಣಿಕ ಕಥಾ ಪ್ರಸಂಗಗಳಲ್ಲದೆ ಐತಿಹಾಸಿಕ ಕಥಾ ಪ್ರಸಂಗಗಳನ್ನೂ ಆಡಿ ತೋರಿಸುವುದುಂಟು. ಭಕ್ತ ಪ್ರಹ್ಲಾದ, ರುಕ್ಮಿಣೀ ಸ್ವಯಂವರ, ನಿಜಗುಣ ಶಿವಯೋಗಿ, ನೀಲಕಂಠ, ಕಬೀರದಾಸ, ಜೋಧಬಾಯಿ, ಸಂಗ್ಯಾ ಬಾಳ್ಯಾ, ಭೂಪಸೇನ, ಚಂದ್ರ ಚೂಡಾಮಣಿ ಇವು ಸಣ್ಣಾಟದ ಜನಪ್ರಿಯ ಪ್ರಸಂಗಗಳು. ಹಾಡುವ ಮತ್ತು ಕುಣಿಯುವ ನಟರು ಸಿದ್ಧ ಸಂಭಾಷಣೆಗಳನ್ನು ಕಂಠಪಾಠ ಮಾಡಿ ಒಪ್ಪಿಸುತ್ತಾರೆ. ಪಾತ್ರಗಳು ಮುಖಕ್ಕೆ ಬಣ್ಣ ಬಳಿಯಲೇಬೇಕೆಂಬ ಸಂಪ್ರದಾಯ ಇಲ್ಲಿಲ್ಲ.

ಅಮೃತ ಸೋಮೇಶ್ವರರ ಪ್ರಕಾರ ಬಹು ಹಿಂದೆ ಪ್ರಚಾರದಲ್ಲಿದ್ದ ಬಹುರೂಪಿಗಳ ಆಟವೇ ಕವಲೊಡೆದು ಸಣ್ಣಾಟಗಳು ರೂಪುಗೊಂಡಿರಬಹುದು. ಕಂಪೆನಿ ನಾಟಕಗಳ ಪ್ರಭಾವವೂ ಇವುಗಳ ಮೇಲೆ ಸಾಕಷ್ಟಾಗಿದೆ. ತಾಳ, ಸಾರಂಗಿ, ದಪ್ಪು ಇತ್ಯಾದಿ ವಾದ್ಯಗಳನ್ನು ಹಿಮ್ಮೇಳದಲ್ಲಿ ಬಳಸುತ್ತಾರೆ.[ ಯಕ್ಷಾಂದೋಳ, ಪುಟ 33]

3. ಕೃಷ್ಣ ಪಾರಿಜಾತ :

ಕೃಷ್ಣನ ಲೀಲಾ ವಿಲಾಸವನ್ನು ಪ್ರದರ್ಶಿಸುವ ಗೀತ ನಾಟಕವೇ ಕೃಷ್ಣ ಪಾರಿಜಾತ. ಅಪರಾಳ ತಮ್ಮಣ್ಣ ಕವಿಯೆಂಬಾತ ಬರೆದ ಈ ರೂಪಕ ಪ್ರಕಾರವನ್ನು ಗೋಕಾಕದ ಕುಲಿಗೋಡು ತಿಮ್ಮಣ್ಣ ಪ್ರಚಾರಕ್ಕೆ ತಂದನು. ಇದು ಉತ್ತರ ಕರ್ನಾಟಕ ದಾದ್ಯಂತ ಬಹಳ ಜನಪ್ರಿಯವಾದ ಯಕ್ಷಗಾನ ಪ್ರಭೇದವಾಗಿದೆ.

ಕೃಷ್ಣ ಪಾರಿಜಾತದ ಲಕ್ಷಣಗಳು

ಕೃಷ್ಣ ಪಾರಿಜಾತ
ಸಾಂಪ್ರದಾಯಿಕ ಹಿಮ್ಮೇಳವಿದ್ದರೂ ಪಾತ್ರಧಾರಿಗಳು ತಮ್ಮ ಹಾಡುಗಳನ್ನು ತಾವೇ ಹಾಡುತ್ತಾರೆ. ಪೂರ್ವರಂಗದಲ್ಲಿ ಗಣಪತಿಯ ಮುಖವಾಡ ಧರಿಸಿದವನನ್ನು ಎರಡು ಸ್ತ್ರೀ ಪಾತ್ರಗಳು ಸ್ತುತಿ ಹಾಡಿನಿಂದ ಪೂಜಿಸುತ್ತಾರೆ. ಆ ಬಳಿಕ ಬರುವ ಕೃಷ್ಣಗೊಲ್ಲತಿ ನಡುವೆ ಸಂಭಾಷಣೆ ನಡೆಯುತ್ತದೆ. ಕೃಷ್ಣನು ಗೊಲ್ಲತಿಯನ್ನು ಒಲಿಸಿ ನಿರ್ಗಮಿಸಿ ದಲ್ಲಿಗೆ ಪೂರ್ವರಂಗ ಕೊನೆಗೊಳ್ಳುತ್ತದೆ.

ಭಾಗವತನನ್ನು ‘ದೂತೆ’ ಎಂದು ಕರೆಯಲಾಗುತ್ತದೆ. ಆತನೇ ಹಾಸ್ಯವನ್ನೂ ಮಾಡುವುದಿದೆ. ಅವನ ಸಹಾಯಕ ಹಾಸ್ಯಗಾರನನುನ ‘ಹಿಮ್ಮ್ಯಾಳ್ಯ’ ಎಂಬ ಹೆಸರಿನಿಂದ ಕರೆಯುತ್ತಾರೆ. ಕಥಾ ಪ್ರಸಂಗವು ಗೀತ ನಾಟಕದಂತಿದ್ದು, ಪದ್ಯದ ಅರ್ಥವನ್ನು ನಟರು ವಿವರಿಸುತ್ತಾರೆ. ಸ್ತ್ರೀಯರೂ ಪಾತ್ರ ಮಾಡುತ್ತಾರೆ. ತಬಲಾ, ಹಾರ್ಮೋನಿಯಂ, ಸಾರಂಗಿಯಂತಹ ವಾದ್ಯಗಳು ಹಿಮ್ಮೇಳದಲ್ಲಿ ಬಳಕೆಯಾಗುತ್ತವೆ. ಚೆಂಡೆಯ ಬಳಕೆ ಇಲ್ಲ.

ಪಡುವಲ ಪಾಯ ಪ್ರಭೇದ

ಕರಾವಳಿ ಕರ್ನಾಟಕ ಮತ್ತು ಕಾಸರಗೋಡು ಜಿಲ್ಲೆಯಲ್ಲಿ ಪ್ರಚಲಿತದಲ್ಲಿರುವ ಯಕ್ಷಗಾನ ಪ್ರಕಾರಕ್ಕೆ ಪಡುವಲ ಪಾಯವೆಂದು ಹೆಸರು. ಮೂಡಲ ಪಾಯಕ್ಕೆ ಹೋಲಿಸಿ ದರೆ ಪಡುವಲ ಪಾಯ ಯಕ್ಷಗಾನ ಪ್ರಕಾರವು ಬಹಳ ಮುಂದುವರಿದಿದೆ ಮತ್ತು ಆಕರ್ಷಕ ವಾಗಿಯೂ ಇದೆ. ಮೂಡಲ ಪಾಯ ಯಕ್ಷಗಾನದಲ್ಲಿ ಜಾನಪದೀಯ ಅಂಶಗಳೇ ಅಧಿಕ. ಕಲಾವಿದರಲ್ಲಿ ಬಹುತೇಕರು ಅನಕ್ಷರಸ್ಥರು. ಪಡುವಲ ಪಾಯವು ಮಾರ್ಗ ಸ್ವರೂಪವನ್ನು ಪಡೆದುಕೊಂಡಿದೆ. ವಿದ್ಯಾವಂತ ಆವಿಷ್ಕಾರಿಕ ಕಲಾವಿದರಿಂದಾಗಿ ಪಡುವಲ ಪಾಯ ಯಕ್ಷಗಾನಕ್ಕೆ ಚಲನಶೀಲತೆಯ ಗುಣ ಬಂದಿದೆ. ದೇವಾಲಯಗಳ ಅಥವಾ ವ್ಯವಸ್ಥಾಪಕರ ಆಶ್ರಯ ದೊರೆತು ಉದ್ಯಮದ ಸ್ವರೂಪವನ್ನು ಪಡೆದುಕೊಂಡಿದೆ.

ಸ್ಥೂಲವಾಗಿ ಪಡುವಲ ಪಾಯ ಯಕ್ಷಗಾನದಲ್ಲಿ ಬಡಗು ತಿಟ್ಟು ಮತ್ತು ತೆಂಕುತಿಟ್ಟುಗಳೆಂಬ ಪ್ರಭೇದಗಳಿವೆ. ಕಿಟ್ಟೆಲನ ಶಬ್ದಕೋಶದ ಪ್ರಕಾರ ತಿಟ್ಟು ಎಂದರ ಗುಂಪು ಎಂದರ್ಥ. ತಿಟ್ಟುಗಳೂ ಕೂಡಾ ಪಾಯಗಳಂತೆ ಪ್ರಾದೇಶಿಕತೆಯನ್ನು ಅಭಿವ್ಯಕ್ತಿಸುವ ಪರಿಕಲ್ಪನೆಗಳಾಗಿವೆ.

1. ಬಡಗು ತಿಟ್ಟು :

ಬಡಗು ತಿಟ್ಟು
ಉಡುಪಿಯಿಂದ ಉತ್ತರಕ್ಕಿರುವ ಕರಾವಳಿ ಯಕ್ಷಗಾನ ಪ್ರಕಾರವನ್ನು ಬಡಗು ತಿಟ್ಟು ಎಂದು ಕರೆಯಲಾಗುತ್ತದೆ. ಉತ್ತರ ಕನ್ನಡದಲ್ಲಿ ಬಡಗು ತಿಟ್ಟಿಗೆ ಸೇರಿದ ಆದರೆ ಸ್ವಲ್ಪ ಭಿನ್ನವಾದ ಬಡಾ ಬಡಗು ತಿಟ್ಟು ಅಥವಾ ಉತ್ತರ ಕನ್ನಡದ ಮಟ್ಟು ಪ್ರಚಲಿತದಲ್ಲಿದೆ. ಅಲ್ಪ ಸ್ವಲ್ಪ ವ್ಯತ್ಯಾಸಗಳನ್ನು ಬಿಟ್ಟರೆ ಬಡಗು ತಿಟ್ಟು ಮತ್ತು ಬಡಾ ಬಡಗು ತಿಟ್ಟು ಒಂದೇ ಎಂದು ವಿದ್ವಾಂಸರು ಭಾವಿಸುತ್ತಾರೆ.

ಬಡಗು ತಿಟ್ಟಿನ ಲಕ್ಷಣಗಳು

ಅದು ಉಡುಪಿ, ಕುಂದಾಪುರ, ಉತ್ತರ ಕನ್ನಡ ಮತ್ತು ಶಿವಮೊಗ್ಗದ ಕೆಲವು ಕಡೆಗಳಲ್ಲಿ ಪ್ರಚಲಿತವಿರುವ ಯಕ್ಷಗಾನ ಪ್ರಕಾರವಾಗಿದೆ. ಭಾಗವತ ಚಕ್ರತಾಳ ಬಳಸುತ್ತಾನೆ ಮತ್ತು ಹಾಡಿಗೆ ಬಿಡ್ತಿಗೆ ಪಲ್ಲವಿದಿ ಮತ್ತು ಮುಕ್ತಾಯ ಏಕ ಪ್ರಕಾರವಾಗಿರುತ್ತದೆ. ಚೆಂಡೆಯು ಭಾಗವತನ ಬಲ ಭಾಗದಲ್ಲಿದ್ದು ಚೆಂಡೆ ವಾದಕ ಕುಳಿತುಕೊಂಡು ಚೆಂಡೆ ಬಾರಿಸುತ್ತಾನೆ. ಬಡಗು ತಿಟ್ಟು ನೃತ್ಯ ಮತ್ತು ಅಭಿನಯ ಲಾಸ್ಯ ಪ್ರಧಾನವಾಗಿದ್ದು ಅದಕ್ಕೆ ಪೂರಕವಾದ ಚೆಂಡೆಮದ್ದಳೆ ಬಳಕೆಯಾಗುತ್ತದೆ.

ಬಡಗು ತಿಟ್ಟಿನ ಕುಣಿತದಲ್ಲಿ ಧಕ್ಕೆಬಲಿ ಮತ್ತು ಭರತನಾಟ್ಯದ ಪ್ರಭಾವ ಕಂಡುಬರುತ್ತದೆ. ಬಡಗು ತಿಟ್ಟಿನ ವೇಷಭೂಷಣ ಮತ್ತು ಮುಖವರ್ಣಿಕೆಗಳಲ್ಲಿ ವೈವಿಧ್ಯ ಕಡಿಮೆ. ಬಡಗಿನಲ್ಲಿ ಗಿರ್ಕಿಯ ಬದಲು ಕುಮ್ಮಟ್ ಮತ್ತು ಮಂಡಿ ಹಾಕುವುದಕ್ಕೆ ಮಹತ್ವವಿದೆ. ಬಡಗಿನಲ್ಲಿ ಮುಂಡಾಸು ವೇಷಗಳು ಅಧಿಕ. ವೇಷಗಳು ವೀರಕಚ್ಚೆ ಹಾಕಿಕೊಳ್ಳುತ್ತವೆ.

2. ತೆಂಕುತಿಟ್ಟು :

ಉಡುಪಿಯ ದಕಿಣಕ್ಕೆ ಕಾಸರಗೋಡುವರೆಗಿರುವ, ಒಳನಾಡು ಮೂಡಬಿದ್ರಿ, ಬೆಳ್ತಂಗಡಿ, ಬಂಟವಾಳ, ಪುತ್ತೂರು ಮತ್ತು ಸುಳ್ಯ ತಾಲೂಕುಗಳಲ್ಲಿ ಹಾಗೂ ಕೊಡಗಿನ ಪೆರಾಜೆ, ಮಡಿಕೇರಿಗಳಲ್ಲಿ ಪ್ರಚಲಿತವಿರುವ ಯಕ್ಷಗಾನ ಪ್ರಕಾರಕ್ಕೆ ತೆಂಕುತಿಟ್ಟು ಎಂದು ಹೆಸರು. ತುಳು ಯಕ್ಷಗಾನ ಪ್ರಸಂಗಗಳ ಸಂಖ್ಯೆ ಹೆಚ್ಚಾದ ಮೇಲೆ ‘ತುಳುತಿಟ್ಟು’ ಎಂಬ ಪರಿಭಾಷೆಯೊಂದು ಬಳಕೆಯಲ್ಲಿದೆ. ಜಾನಪದ ಮತ್ತು ಐತಿಹ್ಯಗಳನ್ನಾಧರಿಸಿದ ತುಳು ಪ್ರಸಂಗಗಳ ಆಹಾರ್ಯ ಕ್ರಮವು ತುಳುತಿಟ್ಟು ಎನಿಸಿದೆ. ತುಳು ತಿಟ್ಟನ್ನು ತೆಂಕುತಿಟ್ಟಿನ ಒಂದು ಭಾಷಾ ಪ್ರಭೇದವೆನ್ನಬಹುದು.

ತೆಂಕುತಿಟ್ಟಿನ ಲಕ್ಷಣಗಳು

ತೆಂಕು ತಿಟ್ಟು
ಅದು ಉಡುಪಿಯಿಂದ ದಕಿಣಕ್ಕೆ, ದ. ಕ. ಜಿಲ್ಲೆ, ಕಾಸರಗೋಡುಗಳಲ್ಲಿ ಮತ್ತು ಕೊಡಗಿನಲ್ಲಿ ಪ್ರಚಲಿತವಿರುವ ಯಕ್ಷಗಾನ ಪ್ರಕಾರವಾಗಿದೆ. ತೆಂಕುತಿಟ್ಟಿನ ಭಾಗವತ ಜಾಗಟೆಯನ್ನು ಬಳಸುತ್ತಾನೆ. ಹಾಡಿನ ಬಿಡ್ತಿಗೆ, ಮುಕ್ತಾಯಕ್ಕಿಂತ ಧೀರ್ಘವಾಗಿರುತ್ತದೆ. ಚೆಂಡೆಯು ಭಾಗವತನ ಎಡ ಭಾಗದಲ್ಲಿದ್ದು ಚೆಂಡೆವಾದಕ ನಿಂತುಕೊಂಡು ಚೆಂಡೆ ಬಾರಿಸುತ್ತಾನೆ. ತೆಂಕುತಿಟ್ಟಿನಲ್ಲಿ ವೀರರಸ ಪ್ರಧಾನ ನೃತ್ಯಕ್ಕೆ ಆದ್ಯತೆ. ತೆಂಕು ತಿಟ್ಟಿನ ಚೆಂಡೆ ಮದ್ದಳೆಗಳ ನಾದವು ವೀರರಸಕ್ಕೆ ಪೂರಕವಾಗಿದೆ.

ತೆಂಕುತಿಟ್ಟಿನ ಕುಣಿತದಲ್ಲಿ ಭೂತಾರಾಧನೆ, ಕಥಕ್ಕಳಿಗಳ ಪ್ರಭಾವ ಕಂಡು ಬರುತ್ತದೆ. ತೆಂಕು ತಿಟ್ಟಿನ ವೇಷಭೂಷಣ ಮತ್ತು ಮುಖವರ್ಣಿಕೆಗಳು ತುಂಬಾ ವೈವಿಧ್ಯ ಮಯವಾಗಿರುತ್ತವೆ. ತೆಂಕುತಿಟ್ಟಿನ ಬಣ್ಣದ ವೇಷಗಳು ಅಪೂರ್ವ ಸೃಷ್ಟಿಗಳಾ ಗಿವೆ. ತೆಂಕುತಿಟ್ಟಿನಲ್ಲಿ ಗಿರ್ಕಿಗೆ ಹೆಚ್ಚು ಮಹತ್ವವಿದೆ. ತೆಂಕಿನಲ್ಲಿ ಕಿರೀಟ ವೇಷಗಳು ಅಧಿಕ. ವೇಷಗಳು ವೀರಗಚ್ಚೆಯ ಬದಲು ಬಾಲ್‌ಮುಂಡು ಧರಿಸುತ್ತವೆ.

ಡಾ. ಪ್ರಭಾಕರ ಜೋಷಿಯವರ ಪ್ರಕಾರ ‘ಸಂಗೀತ, ಚಿತ್ರ, ರಂಗ ವಿಧಾನ, ಸಂಘಟನೆ, ಪಾತ್ರ ಪ್ರಕಾರ ಇವುಗಳಲ್ಲೆಲ್ಲ ತೆಂಕುಬಡಗು ಇವು ಇಂದಿಗೂ ಒಂದೇ……ಸಂಗೀತದಲ್ಲಿ ತೆಂಕುಬಡಗು ಒಂದೇ ಆಗಿದ್ದು, ಮುಖ್ಯ ರಾಗಗಳಂತೂ ಪೂರ್ತಿ ಒಂದೇ ರೀತಿ ಇವೆ. ಪದ್ಯಗಳ ಎತ್ತುಗಡೆ, ನಿಲುಗಡೆ, ಗಮಕಗಳಲ್ಲಿ ಒಂದಿಷ್ಟು ವ್ಯತ್ಯಾಸಗಳೂ ಇವೆ……….. ತೆಂಕಣ ವಾದ್ಯಗಳಲ್ಲಿ ಝೇಂಕಾರ ಹೆಚ್ಚು. ತೆಂಕಿನ ಚೆಂಡೆ ಒಂದು ಅಸಾಧಾರಣ ಪರಿಷ್ಕಾರವಾದ ವೈಭವದ ವಾದ್ಯ…………..ತೆಂಕಣ ಕುಣಿತದಲ್ಲಿ ಕಿರು ಹೆಜ್ಜೆಗಳೊಂದಿಗೆ ದೊಡ್ಡ ಹೆಜ್ಜೆಗಳು, ಗಿರ್ಕಿ ಅಥವಾ ಧೀಗಿಣ, ಹೆಚ್ಚು ಬೀಸು ಇರುವ ಚಲನೆಗಳಿವೆ. ಬಡಗಿನ ನೃತ್ಯದಲ್ಲಿ ಲಾಲಿತ್ಯ ಹೆಚ್ಚು. ತೆಂಕಣ ರಾಜವೇಷ, ಬಣ್ಣದ ವೇಷಗಳ ಪ್ರವೇಶ, ವೀರರಸದ ಕುಣಿತ ಇವೆಲ್ಲ ಅಸಾಮಾನ್ಯ ಕಲಾಸೃಷ್ಟಿಗಳು. [ ಕೇದಗೆ 1986 ಪುಟ 1112]

********************


ಕೃಪೆ : www.chilume.com

ಚಿತ್ರಗಳ ಕೃಪೆ : ಅ೦ತರ್ಜಾಲದಲ್ಲಿ ಯಕ್ಷಗಾನಾಭಿಮಾನಿಗಳಿ೦ದ ಪ್ರಕಟಿಸಲ್ಪಟ್ಟ ಸ೦ಗ್ರಹದಿ೦ದ


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ